Saturday, 23 June 2018

ಪಾಪು

ನಮ್ಮ ಮನೆಯಲೊಂದು ಸಣ್ಣ ಪಾಪವಿರುವುದು
ಎತ್ತಿಕೊಳಲು ಹೋದರದಕೆ ಕೋಪ ಬರುವುದು

ಕೋಪ ಬರಲು ಗಟ್ಟಿಯಾಗಿ ಕಿರಿಚಿಕೊಳುವುದು
ಕಿರಿಚಿಕೊಂಡು ತನ್ನ ಮೈಯ ಪರಚಿಕೊಳುವುದು

ಮೈಯ ಪರಚಿಕೊಂಡು ಪಾಪ ಅತ್ತು ಕರೆವುದು
ಅಳಲು ಕಣ್ಣಿನಿಂದ ಸಣ್ಣ ಮುತ್ತು ಸುರಿವುದು

ಪಾಪ ಅತ್ತರಮ್ಮ ತಾನೂ ಅತ್ತುಬಿಡುವಳು
"ಅಯ್ಯೋ ಪಾಪ" ಎಂದುಕೊಂಡು ಮುತ್ತು ಕೊಡುವಳು

ಪಾಪ ಪಟ್ಟು ಹಿಡಿದ ಹಟವು ಸಾರ್ಥಕವಾಯಿತು
ಕಿರಿಚಿ ಪರಚಿ ಅಳುವುದೆಲ್ಲ ಅರ್ಥವಾಯಿತು

                                                        - ಕುವೆಂಪು

ಚಂದಿರ

ಅವರವರ ಮನದಂತೆ ಕಲ್ಪನೆಯೂ ಬೇರೆ ಬೇರೆ
ಕವಿಗೆ ಚಂದಿರ ಹೆಂಡತಿಯ ಮೋರೆ
ಮಕ್ಕಳಿಗೆ ಆಟದ ಚೆಂಡು
ವಿಜ್ಞಾನಿಗಳಿಗೆ ಬರೀ ಕಲ್ಲು ಗುಂಡು

ಬಣ್ಣದ ಬುಗುರಿ



ನನ್ನಯ ಬುಗುರಿ ಬಣ್ಣದ ಬುಗುರಿ
'ಗುರು ಗುರು' ಸದ್ದನು ಮಾಡುವ ಬುಗುರಿ

ಜಾಳಿಗೆ ಸುತ್ತಿ ಕೈಯನು ಎತ್ತಿ
ಬೀಸಲು ಭರದಿ ಸುತ್ತುವ ಬುಗುರಿ

ಹೊಡೆತಕೆ ಅಂಜದೆ ಕೆಚ್ಚೆದೆಯಿಂದಲಿ
'ಗಿರಿ ಗಿರಿ' ತಿರುಗುವ ಮೆಚ್ಚಿನ ಬುಗುರಿ

ಅಂಗೈ ಮೇಲೆ ಆಡುವ ಬುಗುರಿ
ಕಚಗುಳಿಯಿಕ್ಕುವ ಮೋಜಿನ ಬುಗುರಿ

ಕಾಮನ ಬಿಲ್ಲನು ಭೂಮಿಗೆ ಇಳಿಸಿ
'ಗರ ಗರ' ಸುತ್ತುವ ಬಣ್ಣದ ಬುಗುರಿ

ಆಮೆ



ಆಮೆಯೊಂದು ಕೆರೆಯ ದಡದಿ
ಮನೆಯ ಮಾಡಿತು

ಹಕ್ಕಿಯಂತೆ ಹಾರಬೇಕು
ಎಂದು ಬಯಸಿತು

ಗೆಳೆಯ ಹಕ್ಕಿಗಳನು
ಕಂಡು ಆಸೆ ತಿಳಿಸಿತು

ಹಕ್ಕಿಯೆರಡು ಆಮೆ
ಮಾತ ಒಪ್ಪಿಕೊಂಡವು

ಅತ್ತ ಇತ್ತ ಹಕ್ಕಿಯೆರಡು
ಬಾಡಿಗೆ ಹಿಡಿದವು

ಆಮೆ ಅದಕೆ ಜೋತು ಬೀಳೆ
ಹಾರಿಹೋದವು

ದಾರಿಯಲ್ಲಿ ಇದನು ಕಂಡ
ಜನರು ನಕ್ಕರು

ಮಾನ ಹೋಯಿತೆಂದು ಆಮೆ
ಮನದಿ ಕುದಿಯಿತು

ನಕ್ಕ ಜನರ ಬೈಯ್ಯಲೆಂದು
ಬಾಯಿ ತೆರೆಯಿತು

ಮೇಲಿನಿಂದ ಕೆಳಗೆ ಬಿದ್ದು
ಸತ್ತು ಹೋಯಿತು !

ಬಾವುಟ


ಏರುತಿಹುದು ಹಾರುತಿಹುದು
ನೋಡು ನಮ್ಮ ಬಾವುಟ

ತೋರುತಿಹುದು ಹೊಡೆದು ಹೊಡೆದು
ಬಾನಿನಗಲ ಪಟ ಪಟ

ಕೇಸರಿ ಬಿಳಿ ಹಸಿರು ಮೂರು
ಬಣ್ಣ ನಡುವೆ ಚಕ್ರವು

ಸತ್ಯ ಶಾಂತಿ ತ್ಯಾಗ ಮೂರ್ತಿ
ಗಾಂಧಿ ಹಿಡಿದ ಚರಕವು

ಇಂಥ ಧ್ವಜವು ನಮ್ಮ ಧ್ವಜವು
ನೋಡು ಹಾರುತಿರುವುದು

ಧ್ವಜದ ಶಕ್ತಿ ನಮ್ಮ ಭಕ್ತಿ
ನಾಡಗುಡಿಯ ಮೆರೆವುದು

ಕೆಂಪು ಕಿರಣ ತುಂಬಿ ಗಗನ
ಹೊನ್ನ ಬಣ್ಣವಾಗಿದೆ

ನಮ್ಮ ನಾಡ ಗುಡಿಯ ಬಣ್ಣ
ನೋಡಿರಣ್ಣ ಹೇಗಿದೆ

                                            - ಕಯ್ಯಾರ ಕಿಞ್ಞಣ್ಣ ರೈ

ಮರದ ಬೇರು

ಇದ್ದ ಮೂವರ ಪೈಕಿ
ಕದ್ದವರು ಯಾರು?

ತಾನೆಂದು ಒಪ್ಪಿಕೊಂಡಿತು
ಮರದ ಬೇರು

ಭೂಮಿಯೊಳಗಿನ ಸತ್ವವನು ಹೀರಿಕೊಂಡೆ
ಹಣ್ಣು-ಹಂಪಲುಗಳನು ಮನುಜನಿಗೆ ಕೊಟ್ಟೆ

ಗಾಳಿಪಟ




ಅಣ್ಣನು ಮಾಡಿದ ಗಾಳಿಪಟ
ಬಣ್ಣದ ಹಾಳೆಯ ಗಾಳಿಪಟ


                 ನೀಲಿಯ ಬಾನಲಿ
                 ತೇಲುವ ಸುಂದರ
                 ಬಾಲಂಗೋಚಿಯ ನನ್ನ ಪಟ


ಬಿದಿರಿನ ಕಡ್ಡಿಯ ಗಾಳಿಪಟ
ಬೆದರದ ಬೆಚ್ಚದ ಗಾಳಿಪಟ


                 ದಾರವ ಜಗ್ಗಿ
                 ದೂರದಿ ಬಗ್ಗಿ
                 ತಾರೆಯ ನಗಿಸುವ ನನ್ನ ಪಟ


ಉದ್ದದ ಬಾಲದ ಗಾಳಿಪಟ
ನನ್ನಯ ಮುದ್ದಿನ ಗಾಳಿಪಟ